RDPR,Hosanagara,M Guddekoppa,Praveen GN
Hosanagara
ಹೊಸನಗರ: ಗ್ರಾಮ ಪಂಚಾಯತಿ ಪಿಡಿಒಗಳಿಗೆ ತಾಂತ್ರಿಕ ಹುದ್ದೆಗೆ ನೀಡುವ ಸಮನಾದ ವೇತನ ಶ್ರೇಣಿ ನಿಗದಿ ಪಡೆಯಬೇಕು. ಸೇವಾ ವಿಷಯಗಳಿಗೆ ಸೂಕ್ತ ಸೌಲಭ್ಯಗಳಾದ ಸುಸಜ್ಜಿತ ಕಚೇರಿ, ಉತ್ತಮ ಪರಿಕರ, ಸಿಯುಜಿ ಸಿಮ್/ಡಾಟ ಹೊಂದಿದ ಮೊಬೈಲ್ ಪೋನ್, ಗೂಗಲ್ ಕ್ರೋಮ್ ಬುಕ್/ಟಾಪ್, ಪ್ರಿಂಟರ್, ಸ್ಕ್ಯಾನರ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಆದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಕಾಲ ಪ್ರತಿಭಟನೆಯಲ್ಲಿ ಹೊಸನಗರ ತಾಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿ ವರ್ಗ ಭಾಗವಹಿಸುವ ಮೂಲಕ ನೈತಿಕ ಬೆಂಬಲ ಸೂಚಿಸಿದೆ.
ಸೋಮವಾರ ಪ್ರತಿಭಟನೆಯಲ್ಲಿ ಭಾಗವಹಿಸಿದ ಅಧ್ಯಕ್ಷ ಜಿ.ಎನ್. ಪ್ರವೀಣ ಪತ್ರಕರ್ತರೊಂದಿಗೆ ಮಾತನಾಡಿ ಹೊಸನಗರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಪರವಾಗಿ ತಾವು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಗ್ರಾಮ ಪಂಚಾಯತಿ ಒಕ್ಕೂಟದ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು ಕೂಡಲೇ ಸರ್ಕಾರ ಈ ಕುರಿತು ಗಮನ ಹರಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಪ್ರತಿಭಟನೆಯ ಕಿಚ್ಚು ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಲಿದೆ ಎಂಬ ಎಚ್ಚರಿಕೆ ನೀಡಿದರು.
ಈ ವೇಳೆ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸತೀಶ್ ಕಾಲ್ಸಸಿ, ಸದಸ್ಯ ರಾಘವೇಂದ್ರ, ಪಿಡಿಓ ರವಿ ಎಸ್ .ಕಾರ್ಯದರ್ಶಿ ಯೋಗೇಶ್, ನೀರುಗಂಟಿ ಮೋಹನ್ ರಾಜ್, ಬಿಲ್ ಕಲೆಕ್ಟರ್ ಧರ್ಮಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Table of Contents
Toggle