Hosanagara,Marikamba Temple Hosanagara
Marikamba Temple Hosanagara
ಹೊಸನಗರ : ಪಟ್ಟಣದ ನಗರದೇವತೆ ಮಾರಿಕಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಇಂದಿನಿಂದ (ಮಂಗಳವಾರ) ದಿಂದ ಆರಂಭವಾಗಿದೆ, ಫೆಬ್ರವರಿ 4ರಿಂದ 9ದಿನಗಳ ಕಾಲ ಮಾರಿಜಾತ್ರೆ ಸಂಭ್ರಮದಿಂದ ನಡೆಯಲಿದೆ.

ಮಂಗಳವಾರ ಬೆಳಿಗ್ಗೆ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಮಾರಿಕಾಂಬ ಮೂರ್ತಿಗೆ ವಿಶೇಷ ಪೂಜೆ ನಡೆಯಿತು. ಸಾರ್ವಜನಿಕವಾಗಿ ಪೂಜೆ ನಡೆದ ನಂತರ ಮಾರಿಕಾಂಬ ದೇವಿಯನ್ನು ಇಲ್ಲಿನ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ ತಾಯಿಯ ತವರುಮನೆಯಾದ ಹಳೇ ಸಾಗರ ರಸ್ತೆ ದುರ್ಗಾಂಬ ದೇವಸ್ಥಾನಕ್ಕೆ ಕರೆ ತರಲಾಯಿತು. ದೇವಸ್ಥಾನ ಎದುರಿನ ಮುಖಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.


ಮೆರವಣಿಗೆಯಲ್ಲಿ ನೂರಾರು ಭಕ್ತರು ಸೇರಿದ್ದರು. ಜಾತ್ರಾ ಸಮಯದ ಮೊದಲ ದಿನ ತವರು ಮನೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಿಳೆಯರು ತಾಯಿಗೆ ಉಡಿ ತುಂಬಿ ಬಾಗಿನ ಅರ್ಪಿಸಿದರು. ಸುತ್ತಮುತ್ತಲ ಹಳ್ಳಿಗಳಿಂದ ಭಕ್ತರು ಬಂದು ಮಡಿಲು ತುಂಬಿದರು. ಹಣ್ಣು, ಕಾಯಿ, ಆರತಿ ತಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ನೆರವೇರಿಸಿದರು.
ಮಂಗಳವಾರ ರಾತ್ರಿ ಮಾರಿಕಾಂಬ ದೇವಿಯನ್ನು ಮಾರಿಗುಡ್ಡದಲ್ಲಿರುವ ಗಂಡನ ಮನೆ ಗದ್ದಿಗೆಗೆ ಮೆರವಣಿಗೆ ಮೂಲಕ ಕೊಂಡೊಯ್ಯುವುದು ವಾಡಿಕೆ. ಅಲ್ಲಿ 8 ದಿನಗಳ ಕಾಲ ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತದೆ. ದಿನವೂ ಧಾರ್ಮಿಕ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ, ಆಟೋಟ, ರಂಜನೆಯ ಕಾರ್ಯಕ್ರಮಗಳು ನಡೆಯಲಿವೆ.
Hosanagara,Marikamba Temple Hosanagara.

